ಕ್ರೀಯೋಡಾಂಟ

ಕಾರ್ನಿವೋರ ಗಣಕ್ಕೆ ಸೇರಿದ ಒಂದು ಉಪಗಣ. ಸೀನೋಜೆóೂೀಯಿಕ್ ಯುಗದ ಟರ್ಷಿಯರಿ ಅವಧಿಯ ಇಯೋಸೀನ್ ಮತ್ತು ಪೇಲಿಯೊಸೀನ್ ಕಲ್ಪಗಳಲ್ಲಿ ಜೀವಿಸಿದ್ದ ಮಾಂಸಾಹಾರಿ ಪ್ರಾಣಿಗಳನ್ನೊಳಗೊಂಡಿದೆ. ಈಗ ಸಂಪೂರ್ಣವಾಗಿ ನಿರ್ವಂಶವಾಗಿರುವ ಈ ಪ್ರಾಣಿಗಳು ಫಾಸಿಲ್ ರೂಪದಲ್ಲಿ ಮಾತ್ರ ಸಿಕ್ಕಿವೆ. ಇಂದಿನ ಆಧುನಿಕ ಮಾಂಸಾಹಾರಿಗಳ ಪೂರ್ವಜಪ್ರಾಣಿಗಳು ಇವು ಎಂದು ಹೇಳಲಾಗಿದೆ. ಈ ಗಣದಲ್ಲಿ ಹಲವಾರು ಕುಟುಂಬಗಳಿದ್ದು ಇವು ಪರಸ್ಪರ ವ್ಯತ್ಯಾಶಗಳನ್ನು ಪ್ರದರ್ಶಿಸಿದರೂ ಎಲ್ಲಕ್ಕೂ ಸಮಾನವಾದ ಕೆಲವು ನಿಮ್ನ ಗುಣಲಕ್ಷಣಗಳಿದ್ದುವು. ಚಿಕ್ಕಗಾತ್ರದ ಮಿದುಳು, ಕಾರ್ಪಸಿನ ಸ್ಕ್ಯಾಫಾಯ್ಡ್ ಮತ್ತು ಲೂನಾರ್ ಮೂಳೆಗಳು ಪರಸ್ಪರ ಬೇರೆಯಾಗಿರುವುದು, ಎಲುಬಾಗಿಲ್ಲದ ಟಿಂಪ್ಯಾನಿಕ್ ಬುಲ್ಲ, ಕಾರ್ನೇಸಿಯಲ್ ಹಲ್ಲು ಇಲ್ಲದಿರುವುದು-ಇವು ಕೆಲವು ಲಕ್ಷಣಗಳು. ಕಾರ್ನೇಸಿಯಲ್ ಹಲ್ಲಿನ ಬದಲು ದವಡೆಯ ಉಳಿದ ಹಲ್ಲುಗಳು ಮಾಂಸಾಹಾರವನ್ನು ಹರಿಯಲು ಅನುಕೂಲವಾಗಿದ್ದುವು. ಕ್ರಿಯೊಡಾಂಟುಗಳು ಕೀಟಭಕ್ಷಕಗಳಿಗಿಂತ (ಇನ್ಸೆಕ್ಟಿವೋರ) ಹಲವಾರು ಲಕ್ಷಣಗಳಲ್ಲಿ ಭಿನ್ನವಾಗಿದ್ದು ತಮ್ಮ ದೊಡ್ಡ ಗಾತ್ರದ ಕೋರೆಹಲ್ಲುಗಳು, ಸ್ಥೂಲವಾದ ಮೂತಿ ಮತ್ತು ಬಲವಾದ ಜೈಗೊಮ್ಯಾಟಿಕ್ ಕಮಾನುಗಳುಳ್ಳ ದವಡೆಗಳಿಂದ ಆಧುನಿಕ ಕಾರ್ನಿವೋರ ಗುಂಪಿನ ಪ್ರಾಣಿಗಳನ್ನು ಹೆಚ್ಚು ಹೋಲುತ್ತಿದ್ದವು.

	ಕ್ರಿಯೊಡಾಂಟ ಉಪಗಣವನ್ನು ಹಲವಾರು ಕುಟುಂಬಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಆಕ್ರ್ಟೊಸಯಾನಿಡೀ, ಆಕ್ಸೈಯೆನಿಡೀ, ಹೈಯನೊಡಾಂಟಿಡೀ ಮತ್ತು ಮೀಸೊನೈಕಿಡೀಗಳು ಮುಖ್ಯವಾದವು. ಆಕ್ರ್ಟೊಸಯಾನಿಡೀ ಕುಟುಂಬದ ಪ್ರಾಣೀಗಳು ಸರ್ವಭಕ್ಷಿಗಳಾಗಿದ್ದುವು. ಪೇಲಿಯೊಸೀನ್ ಮತ್ತು ಇಯೊಸೀನ್ ಕಲ್ಪಗಳ ಪೂರ್ವಾರ್ಧದಲ್ಲಿ ಜೀವಿಸಿದ್ದ ಇವು ಪ್ರಾಚೀನ ಗೊರಸುಳ್ಳ ಪ್ರಾಣಿಗಳನ್ನು ಬಹುವಾಗಿ ಹೋಲುತ್ತಿದ್ದುವು. ಆಕ್ಸೈಯೆನಿಡೀ ಕುಟುಂಬದವು ಪೇಲಿಯೊಸೀನ್ ಕೊನೆಯಲ್ಲಿ ಮತ್ತು ಇಯೊಸೀನಿನಲ್ಲಿ ಜೀವಂತವಾಗಿದ್ದುವು. ನಿಜವಾದ ಮಾಂಸಹಾರಿಗಳಾದ ಇವುಗಳಲ್ಲಿ ಕೆಲವು ಆಧುನಿಕ ವುಲ್ವರೈನ್ ಪ್ರಾಣಿಯಂತೆ ಇದ್ದುವು (ಉದಾ: ಆಕ್ಸೈಯೀನ). ಪೇಲಿಯೊನಿಕ್ಟಿಸ್ ಎಂಬ ಪ್ರಾಣಿ ಆಧುನಿಕ ಹುಲಿಜಾತಿಯವುಗಳನ್ನು ಹೋಲುತ್ತದೆ. ಹೈಯೆನೊಡಾಂಟಿಡೀ ಕುಟುಂಬದ ಕ್ರೀಯೊಡಾಂಟುಗಳು ಉತ್ತರ ಅಮೆರಿಕ, ಯೂರೋಪ್, ಏಷ್ಯ ಮತ್ತು ಆಫ್ರಿಕಗಳಲ್ಲೆಲ್ಲ ವ್ಯಾಪಿಸಿದ್ದುವು. ಇಯೊಸೀನ್ ಕಲ್ಪದ ಆದಿ ಮತ್ತು ಮಧ್ಯಭಾಗ ಇವುಗಳ ಕಾಲ. ಸೈನೋಪ, ಪ್ರೋವೈವೆರ ಮುಂತಾದ ಪ್ರಭೇದಗಳ ದೇಹ ಮತ್ತು ಕಾಲುಗಳ ಗಾತ್ರ ಆಧುನಿಕ ಸಿವೆಟ್ ಬೆಕ್ಕುಗಳಲ್ಲಿ ಈಗ ಇರುವಂತೆಯೆ ಇತ್ತು. ಬಾಲ ಮಾತ್ರ ಹೆಚ್ಚು ಉದ್ದ ಮತ್ತು ಭಾರ. ಲಿಮ್ನೊಸಯಾನ್ ಎಂಬುದು ಆಕಾರ, ಹಲ್ಲು ಮತ್ತು ನಡತೆಗಳಲ್ಲಿ ಆಧುನಿಕ ವೀಸಲ್ ಮತ್ತು ಮಾರ್ಟನುಗಳಂತೆಯೆ ಇತ್ತೆಂದು ಹೇಳಲಾಗಿದೆ. ಈ ಕುಟುಂಬದ ಪ್ರಭೇದಗಳ ವ್ಯಾಪ್ತಿ ಇಯೊಸೀನ್ ಮತ್ತು ಆಲಿಗೊಸೀನ್ ಕಲ್ಪಗಳಲ್ಲಿ ಅತಿ ಹೆಚ್ಚಾಗಿದ್ದುದಲ್ಲದೆ ಕೆಲವು ಆಫ್ರಿಕದಲ್ಲಿ ಮಯೊಸೀನ್ ಕಲ್ಪದಲ್ಲೂ ಭಾರತದಲ್ಲಿ ಪ್ಲಿಯೊಸೀನ್ ಕಲ್ಪದಲ್ಲೂ ಜೀವಿಸಿದ್ದುವು. ಮೀಸೊನೈಕಿಡೀ ಕುಟುಂಬದವು ವಿಚಿತ್ರ ರೀತಿಯಲ್ಲಿ ಮಾರ್ಪಾಡಾಗಿದ್ದುವು. ಇವುಗಳ ದವಡೆ ಹಲ್ಲುಗಳು ಮೊಂಡಾಗಿದ್ದವು; ಬಹುಶ: ಗಟ್ಟಿಯಾದ ಚಿಪ್ಪುಗಳನ್ನು ಪುಡಿ ಮಾಡುವುದಕ್ಕೋ ರಂಧ್ರ ಮಾಡುವುದಕ್ಕೋ ಈ ಹಲ್ಲುಗಳನ್ನು ಉಪಯೋಗಿಸಿರಬಹುದು. ಮುಸುಡಿಯೂ ದವಡೆಗಳೂ ಉದ್ದವಾಗಿದ್ದುವು. ಕೆಲವಕ್ಕೆ ಕಾಲು ಮತ್ತು ಬೆರಳುಗಳು ನೀಳವಾಗಿದ್ದು ಓಡುವುದಕ್ಕೆ ಅನುಕೂಲವಾಗಿದ್ದುವು. ಇವುಗಳಲ್ಲಿ ಕೆಲವು ಕರಡಿಯಷ್ಟು ಭಾರಿ ಗಾತ್ರದವಾಗಿದ್ದುವು. ಇವಕ್ಕೆ ಉಗುರಿನ ಬದಲು ತಟ್ಟೆಯಾದ ಗೊರಸುಗಳಿದ್ದುವು. ಇವು ಇಯೊಸೀನ್ ಕಾಲದಲ್ಲಿ ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿಯೂ ಪಶ್ಚಿಮ ಯೂರೋಪು ಮತ್ತು ಮಧ್ಯ ಏಷ್ಯದಲ್ಲಿಯೂ ವಾಸಿಸುತ್ತಿದ್ದುವು. ಈ ಕುಟುಂಬದ ಕ್ರಿಯೊಡಾಂಟುಗಳು ಆಗಿನ ಕಾಲದ ಅತಿ ದೊಡ್ಡಗಾತ್ರದ ಮಾಂಸಾಹಾರಿಗಳಾಗಿದ್ದುವು. ಉದಾಹರಣೆಗೆ ಮಂಗೋಲಿಯದಲ್ಲಿ ಇಯೊಸೀನ್ ಕಲ್ಪದ ಉತ್ತರಾರ್ಧದಲ್ಲಿ ಜೀವಿಸಿದ್ದ ಆಂಡ್ರೂ ಸಾರ್ಕಸ್ ಎಂಬ ಪ್ರಾಣಿಯ ತಲೆಬುರುಡೆ 3' ಉದ್ದ ಇತ್ತು.                        (ಎಸ್.ಎನ್.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ